ತಡೆ - ತೋಲಗಳು	

ರಾಜಕೀಯ ಅಧಿಕಾರ ಒಂದು ಸ್ಥಳದಲ್ಲಿ ಅಥವಾ ಒಬ್ಬ ವ್ಯಕ್ತಿಯ ಇಲ್ಲವೇ ಒಂದು ಗುಂಪಿನ ಕೈಯಲ್ಲಿ ಕೇಂದ್ರಿಕೃತವಾಗದಂತೆ ತಡೆಯುವ ಉದ್ದೇಶದಿಂದ ಸರ್ಕಾರದ ಪ್ರಾಧಿಕಾರವನ್ನು ಹಂಚುವ ಸಲುವಾಗಿ ಮಾಡಲಾದ ಸಾಂಸ್ಥಿಕ ವ್ಯವಸ್ಥೆ (ಚೆಕ್ಸ ಅಂಡ್ ಬ್ಯಾಲೆನ್ಸಸ್) ಇದು ವಿಶೇಷವಾಗಿ ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಸುವ್ಯಕ್ತಗೊಂಡಿವೆ.

ವ್ಯಕ್ತಿಸ್ವಾತಂತ್ರ್ಯವನ್ನು ರಕ್ಷಿಸುವುದು ಮತು ಅಧಿಕಾರ ಕೇಂದ್ರಿಕರಣವನ್ನು ತಡೆಯುವುದು-ಈ ಎರಡು ಅಂಶಗಳನ್ನು ಆಧರಿಸಿ ರೂಪುಗೊಂಡಂಥದೇ ತಡೆ ತೋಲಗಳ ಸಿದ್ಧಾಂತ, ವ್ಯಕ್ತಿಸ್ವಾತಂತ್ರ್ಯವನ್ನು ದೊರಕಿಸಬೇಕಾದರೆ ಸರ್ಕಾರದ ಅಧಿಕಾರ ಕೆಲವೇ ವ್ಯಕ್ತಿಗಳಲ್ಲಿ ಅಥವಾ ಒಂದೇ ಅಂಗದಲ್ಲಿ ಕೇಂದ್ರಿಕೃತವಾಗಿರಬಾರದು. ಸರ್ಕಾರವನ್ನು ವಿವಿಧ ಅಂಗಗಳಾಗಿ (ಶಾಸಕಾಂಗ, ಕಾರ್ಯಾಂಗ, ಮತ್ತು ನ್ಯಾಯಾಂಗ) ವಿಂಗಡಿಸಿ, ಪ್ರತಿಯೊಂದಕ್ಕೂ ಪ್ರತ್ಯೇಕವಾದ ಅಧಿಕಾರ ನೀಡುವುದರ ಮೂಲಕ ವ್ಯಕ್ತಿಸ್ವಾತಂತ್ರ್ಯವನ್ನು ದೊರಕಿಸಬಹುದು. ಸರ್ಕಾರದ ಅಂಗಗಳು ತಮ್ಮ ಅಧಿಕಾರಗಳನ್ನು ನಿರಂಕುಶವಾಗಿ ಚಲಾಯಿಸುವುದರ ವಿರುದ್ಧ ಪ್ರತಿಯೊಂದು ಅಂಗವು ಉಳಿದ ಅಂಗಗಳಿಗೆ ಒಂದು ತಡೆಯಾಗಿ ಕಾರ್ಯ ನಿರ್ವಹಿಸುತ್ತದೆ. ಪ್ರತಿಯೊಂದು ಅಂಗವೂ ನಿರ್ವಹಿಸುವ ಕಾರ್ಯದ ಮೇಲೆ ನಿರ್ಬಂಧವಿರುವುದರಿಂದ ಅದು ಇತರ ಅಂಗಗಳ ಮೇಲೆ ಅನಗತ್ಯ ನಿಯಂತ್ರಣ ಹೊಂದುವ ಅಥವಾ ಪ್ರಭಾವ ಬೀರುವ ಸಾಧ್ಯತೆ ಇರುವುದಿಲ್ಲ. ಸರ್ಕಾರ ಪ್ರಜೆಗಳ ಮೇಲೆ ಅಧಿಕಾರವನ್ನು ಚಲಾಯಿಸುವುದರ ಮೇಲೆ ತಡೆಗಳಿರುವುದರಿಂದ ಯಾವುದೇ ಒಂದು ಅಂಗ ಅನಗತ್ಯ ಪ್ರಮಾಣದಲ್ಲಿ ಅಧಿಕಾರ ಚಲಾಯಿಸುವುದು ಸಾಧ್ಯವಿಲ್ಲ. ಆದರೆ ಸರ್ಕಾರದ ಕಾರ್ಯಾಚರಣೆಯ ಮೇಲೆ ನಿರ್ಬಂಧ ಹೇರುವುದು ಅಸಂಬದ್ಧವಾಗಿ ಕಂಡುಬಂದರೂ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಈ ಕ್ರಮ ಸರಿಯೆಂದು ಕಂಡುಬರುತ್ತದೆ.

ಅಮೆರಿಕ ಸಂಯಕ್ತ ಸಂಸ್ಥಾನಗಳ ಸಂವಿಧಾನದಲ್ಲಿ ಅಳವಡಿಸಲಾಗಿರುವ ಅತ್ಯಂತ ಮುಖ್ಯವಾದ ತಡೆಗಳು ಮತ್ತು ತೋಲಗಳು ಈ ರೀತಿ ಇವೆ; 1. ಸಂಘವಾದ (ಫೆಡರಲಿಸಮ್) : ಸಂಘೀಯ (ಫೆಡರಲ್) ಮತ್ತು ರಾಜ್ಯ ಸರ್ಕಾರಗಳ ನಡುವೆ ಪ್ರಾಧಿಕಾರದ (ಅಥಾರಿಟಿ) ವಿಂಗಡಣೆ; 2. ಅಧಿಕಾರಗಳ ಪ್ರತ್ಯೇಕೀರಣ: ಕಾರ್ಯಾಂಗ (ಎಕ್ಷಿಕ್ಯೂಟೀವ್) (ಅಧ್ಯಕ್ಷ ಮತ್ತು ಆತನ ಅಭಿಕರ್ತರು), ಶಾಸಕಾಂಗ, (ಕಾಂಗ್ರೇಸ್) ಮತ್ತು ನ್ಯಾಯಾಂಗ (ಮುಖ್ಯವಾಗಿ ಪರಮೋಚ್ಚ ನ್ಯಾಯಾಲಯ)-ಇವುಗಳ ನಡುವೆ ಸಂಘೀಯ ಪ್ರಾಧಿಕಾರದ ವಿಭಜನೆ 3. ದ್ವಿಸದಸತ್ವ : ಸೆನೆಟ್ ಮತ್ತು ಪ್ರತಿನಿಧಿ ಸಭೆಗಳ ನಡುವೆ, ಧನ ವಿನಿಯೋಗಾಧಿಕಾರವೂ ಸೇರಿದಂತೆ, ಎಲ್ಲ ವೈಧಾನಿಕ ಪ್ರಾಧಿಕಾರದ ಹಂಚಿಕೆ ಒಂದು ವಿಧೇಯಕ ಅಧಿನಿಯಮವಾಗುವ ಮೊದಲು ಅದು ಕಾಂಗ್ರೆಸ್ಸಿನ (ಶಾಸಕಾಂಗದ) ಎರಡು ಸದನಗಳ ಅಂಗೀಕಾರ ಪಡೆದಿರಬೇಕು. ಒಂದು ಸದನ ಅಂಗೀಕರಿಸಿದ ವಿಧೇಯಕಕ್ಕೆ ಅಂಗೀಕಾರ ಸೂಚಿಸಲು ಅಥವಾ ವಿರೋಧ ಸೂಚಿಸಲು ಇನ್ನೊಂದು ಸದನಕ್ಕೆ ಸಂವಿಧಾನದಿಂದ ಅಧಿಕಾರ ದೊರಕಿರುತ್ತದೆ.
ಕಾಂಗ್ರೆಸ್ ಒಂದು ವಿಧೇಯಕವನ್ನು ಅಂಗೀಕರಿಸಿದ ಮೇಲೆ ಅದು ಅಧಿನಿಯಮವಾಗಿ ಘೊಷಿತವಾಗುವ ಮೊದಲು ಅದಕ್ಕೆ, ರಾಷ್ಟ್ರಾಧ್ಯಕ್ಷ (ಕಾರ್ಯಾಂಗ) ತನ್ನ ಒಪ್ಪಿಗೆ ಸೂಚಿಸಿ ಸಹಿ ಹಾಕಲು ಇಲ್ಲವೆ ತನ್ನ ಆಕ್ಷೇಪಣೆಗಳೊಡನೆ ಅದನ್ನು ಕಾಂಗ್ರೆಸಿಗೆ ಹಿಂದಿರುಗಿಸಲು ಸಂವಿಧಾನದಿಂದ ಅಧಿಕಾರ ಹೊಂದಿದ್ದಾನೆ. ಅದನ್ನು ಹೀಗೆ ಹಿಂದಿರುಗಿಸಿದಾಗ, ಮೂರನೆಯ ಎರಡರಷ್ಟು ಬಹುಮತದೊಡನೆ ಅದೇ ವಿಧೇಯಕವನ್ನು ಪುನಃ ಅಂಗೀಕರಿಸಿ ಅಧಿನಿಯಮವೆಂದು ಘೋಷಿಸುವ ಅಧಿಕಾರ ಕಾಂಗ್ರೆಸ್‍ಗೆ ಇದೆ. ಈ ಸಂದರ್ಭದಲ್ಲಿ ರಾಷ್ಟ್ರಾಧ್ಯಕ್ಷ ತನ್ನ ಒಪ್ಪಿಗೆ ಸೂಚಿಸಿ ಸಹಿ ಹಾಕಬೇಕಾದ ಆವಶ್ಯಕತೆ ಇರುವುದಿಲ್ಲ. ಇದನ್ನು ಸಂಸದೀಯ ಪರಿಭಾಷೆಯಲ್ಲಿ ಅಧ್ಯಕ್ಷರ ವೀಟೊ ಅಧಿಕಾರವನ್ನು ರದ್ದುಪಡಿಸುವ ಕ್ರಮ ಎಂದು ಕರೆಯುತ್ತಾರೆ. ಶಾಸಕಾಂಗದ ನಿರಂಕುಶ ಅಧಿಕಾರವನ್ನು ತಡೆಯುವುದಕ್ಕಾಗಿ ರಾಷ್ಟ್ರಾಧ್ಯಕ್ಷ ವೀಟೊ ಅಧಿಕಾರ ಹೊಂದಿರುವುದರಿಂದ, ಆತ ಆ ಅಧಿಕಾರವನ್ನು ನಿರಂಕುಶವಾಗಿ ಚಲಾಯಿಸುವುದನ್ನು ತಡೆಯಲು ಮೇಲಿನ ಕ್ರಮವನ್ನು (ಮೂರನೆ ಎರಡರಷ್ಟು ಬಹುಮತದೊಡನೆ ಮಾತ್ರ) ಅನುಸರಿಸಲು ಕಾಂಗ್ರೆಸ್ ಅಧಿಕಾರ ಹೊಂದಿದೆ.

	ಕಾರ್ಯಾಂಗ ಮತ್ತು ಶಾಸಕಾಂಗಗಳ ವಿರುದ್ಧ ನ್ಯಾಯಾಂಗಕ್ಕೆ ಅಧಿಕಾರ ನೀಡುವ ಮೂಲಕ ಸಂವಿಧಾನ ತೋಲವನ್ನು ಏರ್ಪಡಿಸಿದೆ. ಸಂವಿಧಾನ ನೀಡಿರುವ ಅಧಿಕಾರವನ್ನು ಮೀರಿ ಕಾರ್ಯಂಗ ಮತ್ತು ಶಾಸಕಾಂಗಗಳು ನಿರ್ವಹಿಸುವ ಕಾರ್ಯಗಳನ್ನು ನ್ಯಾಯಬಾಹಿರವಾದುದೆಂದು ಸಾರುವ ಅಧಿಕಾರವನ್ನು ನ್ಯಾಯಾಂಗ ಹೊಂದಿದೆ. ಇದೇ ರೀತಿ, ನ್ಯಾಯಾಂಗ ಮತ್ತು ಕಾರ್ಯಾಂಗಗಳ ವಿರುದ್ಧ ಶಾಸಕಾಂಗಕ್ಕೆ ಸಂವಿಧಾನ ಅಧಿಕಾರ ನೀಡುವ ಮೂಲಕ `ತೋಲ ವನ್ನು ಏರ್ಪಡಿಸಿದೆ. ಅಂದರೆ ತೀವ್ರತರದ ಅಪರಾಧ ಮತ್ತು ದುರ್ವರ್ತನೆಗಳ ಆರೋಪಕ್ಕೆ ಒಳಗಾದ ಕಾರ್ಯಾಂಗ ಮತ್ತು ನ್ಯಾಯಾಂಗದ ಅಧಿಕಾರಿಗಳನ್ನು ವಿಚಾರಣೆಗೆ ಗುರಿಪಡಿಸಲು ಇಲ್ಲವೇ ಅಧಿಕಾರದಿಂದ ತೆಗೆಯಲು ಶಾಸಕಾಂಗ ಅಧಿಕಾರ ಹೊಂದಿದೆ. ರಾಷ್ಟ್ರಾಧ್ಯಕ್ಷನ ಆದೇಶಕ್ಕೆ ಅನುಸಾರವಾಗಿ ಮಾಡಿಕೊಳ್ಳಲಾದ ಒಪ್ಪಂದಗಳಿಗೂ, ಎಲ್ಲ ರಾಯಭಾರಿಗಳು, ಮಂತ್ರಿಗಳು, ನ್ಯಾಯವಾದಿಗಳು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಮುಂತಾದ ಮುಖ್ಯ ನೇಮಕಗಳಿಗೂ ಸೆನೆಟಿನ ಒಪ್ಪಿಗೆ ಇಲ್ಲವೆ ಸಮ್ಮತಿ ಬೇಕಾಗುತ್ತದೆ. ರಾಷ್ಟ್ರಾಧ್ಯಕ್ಷ ಮಾಡಿಕೊಂಡ ಒಪ್ಪಂದಗಳು ಹಾಗೂ ನೇಮಕಗಳಿಗೆ ಸೆನೆಟಿನ ಮೂರನೆಯ ಎರಡರಷ್ಟು ಸದಸ್ಯರ ಒಪ್ಪಿಗೆ ದೊರೆತರೆ ಮಾತ್ರ ಅವು ವಿಧಿಮಾನ್ಯತೆ ಪಡೆಯುತ್ತವೆ.

	ತಡೆ-ತೋಲ ಸಿದ್ಧಾಂತ ರಾಜಕೀಯ ಮೀಮಾಂಸೆಯಷ್ಟೇ ಪ್ರಾಚೀನವಾದುದು. ಪ್ರಾಚೀನ ಗ್ರೀಸಿನಲ್ಲಿ ಪ್ಲೇಟೋ, ಅರಿಸ್ಟಾಟಲ್, ಮಿಶ್ರ ಸರ್ಕಾರವನ್ನು ಸಮರ್ಥಿಸಿದ ಪಾಲಿಬಿಯಸ್ ಇವರಿಂದ ಈ ಸಿದ್ಧಾಂತ ಬೆಳಕಿಗೆ ಬಂದಿತು. ಮಿಶ್ರ ಸರ್ಕಾರದ ಏರ್ಪಾಡಿನಿಂದ ರಾಜಪ್ರಭುತ್ವ, ಶ್ರೀಮಂತಪ್ರಭುತ್ವ ಮತ್ತು ಪ್ರಜಾಪ್ರಭುತ್ವದ ಅಂಶಗಳಿಂದ ವಿವಿಧ ಸಾಮಾಜಿಕ ಗುಂಪುಗಳ ನಡುವೆ ತೋಲವನ್ನು ಏರ್ಪಡಿಸುವ ಸಾಧ್ಯತೆಯನ್ನು ಕಾಣಬಹುದು. ಈ ರೀತಿ ತೋಲವನ್ನು ಏರ್ಪಡಿಸುವ ಮೂಲಕ ನಿರಕುಂಶಪ್ರಭುತ್ವ ಮತ್ತು ಕ್ರಾಂತಿಗಳನ್ನು ತಡೆದು ನ್ಯಾಯ ಹಾಗೂ ವಿವೇಚನೆಗಳನ್ನು ಸಾಧಿಸುವ ನಂಬಿಕೆ ಉಂಟಾಯಿತು.

	ಬ್ರಿಟಿಷ್ ಸಂವಿಧಾನ ರೂಪುಗೊಂಡ ವರ್ಷಗಳಲ್ಲಿ, 1215ರ ಮಹಾ ಸನ್ನದಿನ ಅನಂತರ, ಬಹುಮಟ್ಟಿಗೆ ಇದೇ ರೀತಿಯ ಸಾಮಾನ್ಯ ಭಾವನೆ ಅಸ್ತಿತ್ವಕ್ಕೆ ಬಂತು. ಪ್ರಜೆಗಳ ಪರವಾಗಿ ಸರ್ಕಾರ ಒಂದು ಬಗೆಯ ನ್ಯಾಯದರ್ಶಿಯೆಂಬ ನಂಬಿಕೆಯನ್ನು ಮೂಡಿಸಲು ಜಾನ್ ಲಾಕ್ (1632-1704) ಸಂಸತ್ತು ಮತ್ತು ದೊರೆಯ ನಡುವೆ ತಡೆ-ತೋಲಗಳಿರಬೇಕೆಂದು ವಾದಿಸಿದ. ಹದಿನೆಂಟನೆಯ ಶತಮಾನದ ಇಂಗ್ಲೆಂಡಿನ ಸಂವಿಧಾನದಲ್ಲಿ ದೊರೆ, ಕಾಮನ್ಸ್ ಸಭೆ ಮತ್ತು ಲಾಡ್ರ್ಸ್ ಸಭೆಗಳ ನಡುವೆ ತಡೆ-ತೋಲಗಳನ್ನು ಸ್ಪಷ್ಟವಾಗಿ ಗುರುತಿಸಿದವರು ಬ್ಲ್ಯಾಕ್‍ಸ್ಟ್‍ನ್ ಮತ್ತು ಮಾಂಟೆಸ್ಕ್ಯೂ.

	ರಾಜ್ಯಗಳಲ್ಲಿರುವಂತೆ ಎಲ್ಲ ಅಧಿಕಾರಗಳು ಶಾಸಕಾಂಗದ ಸುಳಿಯಲ್ಲಿ ಸಿಲಕಿಕೊಳ್ಳುವುದನ್ನು ತಪ್ಪಿಸಲು ಅಮೆರಿಕದ ಸಂವಿಧಾನದ ರಚಕರು ನಿರ್ಧರಿಸಿದರು. ಥಾಮಸ್ ಜೆಫರ್‍ಸನನ ಮಾತಿನಲ್ಲೇ ಹೇಳುವುದಾದರೆ, ಒಬ್ಬ ನಿರಕುಂಶ ಪ್ರಭುವಿನಂತೆಯೇ ಇತರ ಒಂದುನೂರ ಇಪ್ಪತ್ಮೂರು ನಿರಕುಂಶ ಪ್ರಭುಗಳು ಕೂಡ ದಬ್ಬಾಳಿಕೆಯ ಅಧಿಕಾರ ನಡೆಸಿಯೇ ತೀರುತ್ತಾರೆ. ಪ್ರತಿಯೊಂದು ಅಂಗಕ್ಕೂ ಸಂವಿಧಾನೀಯ ಅಧಿಕಾರವನ್ನು ನೀಡುವುದರಿಂದ, ವಿರುದ್ಧ ಹಾಗೂ ಪ್ರತಿಸ್ಪರ್ಧಿ ಆಸಕ್ತಿ ಹೊಂದಿರುವ ಇತರ ಅಂಗಗಳ ಅತಿಕ್ರಮಣವನ್ನು ತಡೆಯುವ ಮೂಲಕ ಮಹಾಕಾಂಕ್ಷೆಯನ್ನು ಮಹಾಕಾಂಕ್ಷೆಯಿಂದಲೇ ನಿವಾರಿಸಬಹುದು. ಈ ಮುನ್ನೇರ್ಪಾಡಿನಿಂದ ಸ್ವಾರ್ಥಪರತೆಯ ಉನ್ಮತ್ತಾಭಿಮಾನದ ವಿರುದ್ಧ ಗಣ ರಾಜ್ಯ ಸ್ಥಿರವಾಗಿರುವಂತೆ ಮಾಡಬಹುದು.

	ಸೋವಿಯೆತ್ ದೇಶದಲ್ಲಿ ಸರ್ಕಾರ ಕಾರ್ಯಾಂಗದಲ್ಲಿಯೇ ಕೆಲವು ತಡೆ-ತೋಲಗಳನ್ನು ಏರ್ಪಡಿಸಿಕೊಂಡಿದೆ. ಉದಾಹರಣೆಗಾಗಿ, ಸುಂಕ ವಿಧಿಸುವ, ಜಾರಿಗೊಳಿಸುವ ಮತ್ತು ವಿಚಾರಣೆ ನಡೆಸುವ ಯಾವುದೇ ಕೇಂದ್ರ ಅಥವಾ ಸ್ಥಳೀಯ ಇಲಾಖೆಗಳ ಮೇಲೆ ನ್ಯಾಯಸಚಿವ ಶಾಖೆ ಮತ್ತು ರಾಜ್ಯನಿಯಂತ್ರಣ ಸಚಿವ ಶಾಖೆಗಳು ಅಧಿಕಾರ ಹೊಂದಿವೆ. ಇದೇ ರೀತಿಯ ಆಂತರಿಕ ತಡೆಗಳನ್ನು ಪಾಶ್ಚಾತ್ಯ ಸರ್ಕಾರಗಳಲ್ಲಿ ಕಾಣಬಹುದು. ಅಮೆರಿಕದಲ್ಲಿ ಆಯವ್ಯಯ ವಿಭಾಗ ಆಯವ್ಯಯ ರೂಪಿಸುವ ಮೂಲಕ ಸರ್ಕಾರದ ಎಲ್ಲ ಇಲಾಖೆಗಳ ಮೇಲೆ ತಡೆಯ ಅಧಿಕಾರವನ್ನು ಚಲಾಯಿಸುತ್ತದೆ. ಸರ್ಕಾರದ ಹಣವನ್ನು ಖರ್ಚು ಮಾಡುವ ಎಲ್ಲ ಇಲಾಖೆಗಳ ಲೆಕ್ಕ ಶೋಧನೆ ಮತ್ತು ಖರ್ಚನ್ನು ತಿರಸ್ಕರಿಸುವ ಅಧಿಕಾರವನ್ನು ಮಹಾನಿಯಂತ್ರಕನ ಕಚೇರಿ ಚಲಾಯಿಸುತ್ತದೆ. ಬ್ರಿಟನ್ನಿನಲ್ಲಿ ಸರ್ಕಾರದ ಇಲಾಖೆಗಳ ಕಾರ್ಯಚಟುವಟಿಕೆಗಳ ಮೇಲೆ ಖಜಾನೆ ಇದೇ ರೀತಿ ತಡೆಯ ಅಧಿಕಾರ ಚಲಾಯಿಸುತ್ತದೆ. ಅಧಿಕಾರಗಳನ್ನು ಅತಿಕ್ರಮಿಸಿದ ಅಥವಾ ಶಾಸನಾತ್ಮಕ ರೀತಿಯಲ್ಲಿ ಕಾರ್ಯ ನಿರ್ವಹಿಸಲು ತಪ್ಪಿದ ಎಲ್ಲ ಆಡಳಿತಾಧಿಕಾರಿಗಳ ಮೇಲೆ ಮೊಕದ್ದಮೆ ಹೂಡಲು ಫ್ರಾನ್ಸಿನ ಕಾನ್ಸೇಲ್ ಡ ಇಲ ಎಂಬ ನ್ಯಾಯಾಲಯ ಪರಿಣಾಮಕಾರಿಯಾದ ರೀತಿಯಲ್ಲಿ ತಡೆಯ ಅಧಿಕಾರ ಚಲಾಯಿಸುತ್ತದೆ.

	ಅರ್ಧ ಶತಮಾನದಿಂದೀಚೆಗೆ ಅಧಿಕಾರ ಪ್ರತ್ಯೇಕತೆಯಿಂದಾಗಿ ರಾಷ್ಟ್ರರಾಜ್ಯದಲ್ಲಿ ಅಧಿಕಾರಗಳ ಕೇಂದ್ರೀಕರಣವಾದುದರಿಂದ ತಡೆ-ತೋಲಗಳು ಕ್ಷೀಣಿಸಿದವು. ಇದೇ ಸಂದರ್ಭದಲ್ಲಿ ಸರ್ಕಾರಿ ಯಂತ್ರದಲ್ಲಿ ತಡೆ ಮತ್ತು ತೋಲಗಳು ಹೆಚ್ಚು ವ್ಯಾಪಕ ಹಾಗೂ ಪರಿಣಾಮಕಾರಿಯಾದವು. ಅಮೆರಿಕ ರಾಷ್ಟ್ರ ಸಂಸ್ಥಾಪಕರು ಅಷ್ಟಾಗಿ ಗುರುತಿಸದಿದ್ದ ಮತ್ತೊಂದು ತಡೆ ಇತ್ತೀಚೆಗೆ ಪ್ರಾಮುಖ್ಯಕ್ಕೆ ಬಂದಿದೆ. ಉತ್ತಮವಾಗಿ ವ್ಯವಸ್ಥಿತವಾದ ರಾಜಕೀಯ ಪಕ್ಷಗಳು ಹಾಗೂ ಅವುಗಳ ಜೊತೆ ಜೊತೆಯಲ್ಲಿಯೇ ಕಂಡುಬರುವ ಚುನಾಯಿತ ವರ್ಗ ಮತ್ತು ಆಸಕ್ತ ಹಾಗೂ ಒತ್ತಡ ಗುಂಪುಗಳು ಹೊಂದಿರುವ ಅಧಿಕಾರವೇ ಅದು ಎಂದು-ಹೇಳಲಾಗಿದೆ. ಇದು ರೂಪಿಸುವ ಸಾರ್ವಜನಿಕ ಅಭಿಪ್ರಾಯವನ್ನು ನಿರ್ಲಕ್ಷಿಸುವುದು ಶಾಸಕಾಂಗ ಅಥವಾ ಕಾರ್ಯಾಂಗಕ್ಕೆ ಸಾಧ್ಯವಿಲ್ಲ.
(ಎಂ.ಎನ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ